ಕಾರವಾರ: ಜಿಲ್ಲೆಯ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಮತ್ತು ಯಲ್ಲಾಪುರ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ನಡೆಯಲಿದೆ.
ನ.30 ರಿಂದ ಡಿಸೆಂಬರ 29 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಡಿ.6 ಮತ್ತು 21 ರಂದು ಮತದಾರರ ಪಟ್ಟಿಯಲ್ಲಿಯ ಹೆಸರುಗಳನ್ನು ಗ್ರಾಮ ಸಭೆ ಹಾಗೂ ಸ್ಥಳಿಯ ಸಂಸ್ಥೆಗಳ ವಾರ್ಡಸಭೆಗಳಲ್ಲಿ ಓದಿ ಹೇಳಿ ಹೆಸರುಗಳನ್ನು ಪರಿಶೀಲಿಸಲಾಗುವುದು. ಡಿ. 3 ಮತ್ತು 17 ರಂದು ರಾಜಕೀಯ ಪಕ್ಷಗಳಿಂದ ನಿಯೋಜಿಸಲ್ಪಟ್ಟ ಏಜೆಂಟರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದಿರುವ ಮತದಾರರಿಂದ ಅರ್ಜಿಗಳನ್ನು ಸ್ವೀಕರಿಸುವ ಬಗ್ಗೆ ವಿಶೇಷ ಆಂದೋಲನ ನಡೆಸುವರು. ಡಿ.14 ರಿಂದ 29 ರವರೆಗೆ ವಿಶೇಷ ಅಭಿಯಾನ ನಡೆಸಲಾಗುವದು. ಫೆಬ್ರುವರಿ 15 ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವದು.
1 ಜನೇವರಿ 2018 ಕ್ಕೆ 18 ವರ್ಷ ಪೂರ್ಣಗೊಳ್ಳಲಿರುವ ಹೊಸ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ನ.30 ರಿಂದ ಡಿ.29 ರವರೆಗೆ ನಡೆಯುವ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪರಿಷ್ಕರಣಾ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಕಡಿಮೆ, ತಿದ್ದುಪಡಿ, ವರ್ಗಾವಣೆ ಮಾಡಲು ಇಚ್ಚಿಸುವ ಅರ್ಹ ಮತದಾರರು ಆಯಾ ಮತಗಟ್ಟೆಗಳಲ್ಲಿ ಕಾರ್ಯನಿರತರಾಗಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ನಮೂನೆ 6,7 ಮತ್ತು 8 ರಲ್ಲಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment