ಹೊನ್ನಾವರ : ಕಿಡ್ನಿ ವೈಪಲ್ಯದಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ಬಡ ರೋಗಿಗಳ ಪಾಲಿಗೆ ವರವಾಗಿದ್ದ ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಘಟಕಗಳು ಆಳುವ ಸರ್ಕಾರದ ನಿರ್ಲಕ್ಷ್ಯದಿಂದ ಮುಚ್ಚುವ ಸ್ಥಿತಿಯನ್ನು ತಲುಪಿವೆ.ಸರ್ಕಾರದ ಸೂಕ್ತ ಸ್ಪಂದನೆ ಇಲ್ಲದ ಕಾರಣ ಡಯಾಲಿಸಿಸ್ ಘಟಕಗಳ ನಿರ್ವಹಣೆಯಿಂದ ಬಿ.ಆರ್.ಶೆಟ್ಟಿ ಗ್ರೂಪ್ ಹಿಂದೆ ಸರಿದ ನಂತರ ಕಳೆದ ಮೇ ತಿಂಗಳಿಂದ ಕರ್ತವ್ಯದಲ್ಲಿದ್ದ ಯಾವೊಬ್ಬ ಸಿಬ್ಬಂದಿಗೂ ಸರ್ಕಾರ ಸಂಬಳ ನೀಡಿಲ್ಲ. ವ್ಯವಸ್ಥೆ ಇಂದು ಸರಿಯಾಗಬಹುದು ನಾಳೆ ಸರಿಯಾಗಬಹುದು ಎಂದು ಕಾದು ಕಾದು ಸುಸ್ತಾದ ಸಿಬ್ಬಂದಿಗಳು ಇದೀಗ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿ ನೊಟೀಸ್ ಪಿರಿಯಡ್ ವರ್ಕ್ ಮುಂದುವರಿಸಿದ್ದಾರೆ.
ಹಾಲಿ ಶಾಸಕರುಗಳು, ಮಾಜಿ ಶಾಸಕರುಗಳು ಹಾಗೂ ದಾನಿಗಳ ಸಹಾಯದಿಂದ ಹಾಗೋ ಹೀಗೋ ದಿನ ದೂಡುತ್ತಿರುವ ಡಯಾಲಿಸಿಸ್ ಘಟಕಕ್ಕೆ ಮತ್ತೆ ಯಾರಾದರೂ ದಾನಿಗಳು ಸಲಕರಣೆಗಳನ್ನು ತರಲು ನೆರವು ನೀಡಬೇಕಿದೆ. ಇಲ್ಲವಾದರೆ ಕೇಲವೇ ದಿನದಲ್ಲಿ ಹೊನ್ನಾವರ ತಾಲೂಕಾಸ್ಪತ್ರೆಯ ಡಯಾಲಿಸಿಸ್ ಘಟಕಗಳು ಸೇವೆ ಸ್ಥಗಿತಗೊಳಿಸಲಿದೆ.ಹೊನ್ನಾವರ ತಾಲೂಕಾಸ್ಪತ್ರೆಯೊಂದರಲ್ಲಿಯೇ 33 ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ 12 ಮಂದಿ ರೋಗಿಗಳು ವೇಟಿಂಗ್ ಲಿಸ್ಟ್ ಅಲ್ಲಿ ಇದ್ದಾರೆ. ಮೂರು ತಿಂಗಳಿಂದ ಸಂಬಳವಿಲ್ಲದಿದ್ದರೂ ಟೆಕ್ನಿಷಿಯನ್ಗಳು, ಸಿಬ್ಬಂದಿಗಳು ರೋಗಿಗಳ ಪರದಾಟವನ್ನು ನೋಡಲಾಗದೇ ಕೆಲಸ ಮುಂದುವರಿಸಿದ್ದಾರೆ.

ಒಂದು ಡಯಾಲಿಸಿಸ್ ಯಂತ್ರ ಹಾಳಾಗಿ ಹಲವು ತಿಂಗಳಾದರೂ ದುರಸ್ಥಿ ಮಾಡಿಸುವ ಮನಸ್ಸು ಆಸ್ಪತ್ರೆಯ ಮೇಲಾಧಿಕಾರಿಗಳು ಜನಪ್ರತಿನಿಧಿಗಳು ಮನಸ್ಸು ಮಾಡಿಲ್ಲ . ಡಯಾಲಿಸಿಸ್ ಘಟಕ ನಿರ್ವಹಿಸುವ ಸಿಬ್ಬಂದಿಗಳಿಗೆ ವಿಶ್ರಾಂತಿಗೆ ಊಟ ತಿಂಡಿ , ಬಟ್ಟೆ ಬದಲಾಯಿಸಲು ಸೂಕ್ತ ವ್ಯವಸ್ಥೆಯಿಲ್ಲ. ಹೊರಗಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವವರು ಸಂಬಳವಿಲ್ಲದೇ ಎಷ್ಟುದಿನ ದುಡಿಯುವುದು ಸಾಧ್ಯ? ರೂಮ್ ಬಾಡಿಗೆ ಕಟ್ಟಬೇಕು, ಅವಂಬಿತರ ಬಗ್ಗೆ ಕಾಳಜಿ ವಹಿಸಬೇಕು ಸಮಸ್ಯೆಯನ್ನು ಯಾರಲ್ಲಿ ಹೇಳುವುದು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೊಲ್ಕೊತ್ತಾ ಮೂಲದ ಕಂಪನಿ ಕಥೆ ಏನಾಯ್ತು..?
ಬಿ.ಆರ್.ಶೆಟ್ಟಿ ಕಂಪನಿ ಡಯಾಲಿಸಿಸ್ ಘಟಕ ನಿರ್ವಹಣೆಯಿಂದ ಹಿಂದೆ ಸರಿದರೂ ತೊಂದರೆಯಾಗಲು ಬಿಡುವುದಿಲ್ಲ. ಮುಖ್ಯಮಂತ್ರಿಯವರು ಕೊಲ್ಕೊತ್ತಾ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಒಂದೆರಡು ವಾರಗಳಲ್ಲಿ ಎಲ್ಲವೂ ಸರಿಯಾಗಲಿದೆ ಎನ್ನುವ ಭರವಸೆಯನ್ನು ಸ್ಥಳಿಯ ಶಾಸಕರು ವ್ಯಕ್ತಪಡಿಸಿದ್ದರು. ಆದರೆ ತಿಂಗಳುಗಳೇ ಉರುಳಿದರೂ ಕೊಲ್ಕೊತ್ತಾ ಮೂಲದ ಕಂಪನಿಯ ಪತ್ತೆಯಿಲ್ಲ.
ಶಾಸಕರುಗಳು ವೈಯ್ಯಕ್ತಿವಾಗಿ ಕೆಲ ಸಮಯ ನೆರವು ನೀಡುತ್ತಿದ್ದರೂ ಅದು ಎಲ್ಲಿಯೂ ಸಾಲುತ್ತಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ದೋರಣೆ ತಾಳದೇ ತಕ್ಷಣ ಎಚ್ಚೆತ್ತುಕೊಂಡು ಸರ್ಕಾರದ ಮಟ್ಟದಲ್ಲಿ ಡಯಾಲಿಸಿಸ್ ಘಟಕಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡಿಸುವ ಅಗತ್ಯವಿದೆ. ಇಲ್ಲವಾದರೆ ಡಯಾಲಿಸಿಸ್ ಅವಲಂಬಿತ ರೋಗಿಗಳ ಬದುಕು ನರಕ ಸದೃಶವಾಗಲಿದೆ
ಕಳೆದ ಮೂರು ತಿಂಗಳಿನಿಂದ ಸಂಬಳ ಬಂದಿಲ್ಲ ಶಾಸಕರು ಒಂದು ಬಾರಿ ೬ ಸಾವಿರ ವೈಯಕ್ತಿಕವಾಗಿ ನೀಡಿದ್ದರು.
ನಾವು ವಾಸ್ತವ್ಯವಿರುವ ರೂಂ ಬಾಡಿಗೆ ತಿಂಗಳಿಗೆ ೨೫೦೦ ಇದೆ. ನಮ್ಮ ಊಟ ತಿಂಡಿ ಖರ್ಚು ಇದಕ್ಕೆ ಪರದಾಡುತ್ತಿದ್ದೇವೆ. ಇದರಿಂದಲೇ ರಾಜಿನಾಮೆಯಂತಹ ನಿರ್ದಾರಕ್ಕೆ ಬಂದಿದ್ದೇವೆ. ಮುಂದೆ ನಿರ್ವಹಣೆಗೂ ಹಣವಿಲ್ಲ ನಮ್ಮ ಕಣ್ಣ ಮುಂದೆ ಇಷ್ಟು ದಿನ ನಾವು ಸೇವೆ ನೀಡಿದ ರೋಗಿಗಳ ಪರದಾಟ ನಮ್ಮಿಂದ ನೋಡಲು ಸಾಧ್ಯವಿಲ್ಲ ಅದಕ್ಕಾಗಿಯೆ ಈ ನಿರ್ದಾರಕ್ಕೆ ಬಂದಿದ್ದೇವೆ.ರಾಜಿನಾಮೆ ನೀಡಿದ ಡಯಾಲಿಸಿಸ್ ಸಿಬ್ಬಂದಿ.,.
ಕ್ಷೇತ್ರದ ಇರ್ವರ ಶಾಸಕರು ಬಿಜೆಪಿಯವರು ಕೇಂದ್ರ ಹಾಗೂ ರಾಜ್ಯದಲ್ಲಿ ಇವರದೇ ಸರ್ಕಾರವಿದೆ. ಸಭೆ ಸಮಾರಂಭದಲ್ಲಿ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ನಮ್ಮ ಬಿಜೆಪಿ ತಾಕತ್ತು ಎಂದು ಭಾಷಣ ಮಾಡುವ ಶಾಸಕರೇ ಕ್ಷೇತ್ರದಲ್ಲಿ ಈ ಸಮಸ್ಯೆಗೆ ಸ್ಪಂದಿಸಿ ಸರ್ಕಾರದ ತಾಕತ್ತು ಪ್ರದರ್ಶಿಸಲಿ
Leave a Comment