ಹೊನ್ನಾವರ:
ಪುಸ್ತಕ ಎಂದಿಗೂ ಮನುಷ್ಯನಿಗೆ ಜೀವನಾನುಭವದ ಕೈಗನ್ನಡಿಯಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಹೇಳಿದರು.
ಪಟ್ಟಣದ ಉದ್ಯಮನಗರದ ಸಿರಿಗನ್ನಡ ಪುಸ್ತಕಮನೆಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ನಿಮಿತ್ತ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ `ಓದುವ ಸುಖ’ದ ಕುರಿತು ನಡೆದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ಅಕ್ಷರವೂ ಇನ್ನೊಬ್ಬರಿಗೆ ಉಪಯೋಗವಾಗಲಿ ಎಂಬ ಸದುದ್ದೇಶದಿಂದ ಬರೆಯುವುದರಿಂದ ನನಗೆ ಬರಹ ಅನ್ನುವುದು ಜೊತೆಗಿದ್ದವರ ಜೀವನದ ಒಳಿತಿಗಾಗಿ ಎಂಬ ಬದ್ಧತೆಯಿದೆ. ಎರಡು ಸಾಲುಗಳ ಮಧ್ಯೆ ಇರುವ ಬದುಕಿನ ಸಿಹಿ-ಕಹಿಗಳ ಸತ್ಯವನ್ನು ನಾವು ಅರ್ಥ ಮಾಡಿಕೊಂಡರೆ ಯಾವತ್ತೂ ನಮಗೆ ಪುಸ್ತಕ ನಿತ್ಯ ನೂತನವಾದ ಓದನ್ನು ಒದಗಿಸುತ್ತದೆ ಎಂದರು.
ಕತೆಗಾರ್ತಿ ಸವಿತಾ ಧಾರೇಶ್ವರ ಮಾತನಾಡಿ ಓದುವ ಸುಖ ಅನುಭವವೇದ್ಯವಾದದ್ದು. ಅದೇ ನನಗೆ ಜೀವನ ಪ್ರೇರಣೆಯನ್ನು, ಚೈತನ್ಯವನ್ನು ನೀಡಿದೆ ಎಂದು ಹೇಳಿದರು.
ಸುಮಂಗಲಾ ಎನ್. ಹೆಗಡೆ ಕರ್ಕಿ ಹೊನ್ನಾವರದ ಕವಿ ಕೃಷ್ಣ ಶರ್ಮರು `ಓದುವ ಸುಖ’ದ ಕುರಿತು ಬರೆದ ಕವಿತೆಯನ್ನು ಮಗ ಕು. ವಿಜಯಾನಂದನ ತಬಲಾಸಾಥ್ನೊಂದಿಗೆ ಸುಶ್ರಾವ್ಯವಾಗಿ ಹಾಡಿದರು. ಪುಸ್ತಕಮನೆಯ ಮಾಲಿಕ, ನಾಗರಿಕ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ಕಾರ್ಯಕ್ರಮದ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ವಂದಿಸಿದರು.
ಹೊನ್ನಾವರದ ಹಿರಿಯ ಕವಿ ಕೃಷ್ಣ ಶರ್ಮ, ತಾರಾ ಜಿ. ಭಟ್, ಶಿವಾಜಿ ರಾವ್, ಜಿ.ಎಸ್.ಹೆಗಡೆ ಗಾಳಿ, ಡಾ. ಜಿ.ಎಸ್.ಹೆಗಡೆ ಹಡಿನಬಾಳ, ಮಹೇಶ ಹೆಬ್ಬಾರ, ಗಣೇಶ ಜೋಶಿ ಸಂಕೊಳ್ಳಿ, ವಾಹಿನಿಯ ವರದಿಗಾರ ನಾಗರಾಜ ನಾಯ್ಕ ಖರ್ವಾ, ಸಂತೋಷ ಶೇಟ್, ಸಿಂಧು ಹೆಗಡೆ ಇವರ ಉಪಸ್ಥಿತಿಯಲ್ಲಿ ಸಂವಾದ ನಡೆಯಿತು.
Leave a Comment